Tuesday, October 24, 2006

ನಿನ್ನೆ ನಿನ್ನೆಗೆ ಇಂದು ಇಂದಿಗೆ....(2)

ಈ ಕಾಂಕ್ರೀಟ್ ಕಾಡ್ನಲ್ಲಿ ನಮ್ಮದೊಂದು ಪುಟ್ಟ ಹಸಿರು ಕನಸು ಟೆರೇಸ್ ನಲ್ಲಿನ ಪಾಟ್ ನಲ್ಲಿ ಅರಳಿದ ಬ್ರಹ್ಮಕಮಲ. ಅದು ಮೊಗ್ಗಾದಾಗಿಂದ ಸಂಭ್ರಮ... ಮೇಲೆ ಹತ್ತಿ ಹೋಗಿ ಹೋಗಿ ಅರಳಿತಾ ಅಂತ ನೋಡೋದು ನನಗಂತೂ ಒಂದು ಆಟ'ನೇ ಆಗಿಬಿಟ್ಟಿತ್ತು. ಒಂದು ರಾತ್ರಿ ಹೀಗೇ ಮೇಲೆ ಹತ್ತಿ ಹೋಗಿ ಟೆರೇಸ್ ಬಾಗಿಲು ತೆಗೀತಿದ್ದಂತೇ ಘಮ್ ಅಂತ ಒಂದು ದಿವ್ಯವಾದ ಪರಿಮಳ ಆವರಿಸ್ಬಿಡ್ತು! ನೋಡಿದ್ರೆ ನಮ್ಮ ಪುಟ್ಟ ಪಾಟ್ ನಲ್ಲಿ ಬೆಳ್ಳಗಿನ ಬಿರುನಗೆಯ ಬ್ರಹ್ಮ ಕಮಲ! ಸರಿ ಮನೆ ಮಂದೀನಲ್ಲಾ ಕರೆದು ತೋರಿಸಿ ಸಂಭ್ರಮ ಪಟ್ಟಿದ್ದಾಯ್ತು...
ಅಷ್ಟರಲ್ಲಿ ಅದು ಒಂದೇ ದಿನ ಇರೋದು ಅಂತ ಕೇಳಿದ್ದು ನೆನಪಿಗೆ ಬಂತು. ಕಿತ್ತು ಫ್ರಿಡ್ಜ್ ನಲ್ಲಿ ಇಟ್ಟ್ರೆ ಇರುತ್ತೇನೋ ಅಂತ ತಮ್ಮನ ತಲೆಗೆ ಒಂದು ಐಡಿಯಾ! ಹಾಗೇ ಕಿತ್ತುಬಿಟ್ಟ್ರೆ ಮುರುಟಿ ಹೋಗುತ್ತೇನೋ ಅನ್ನೋ ಯೋಚನೆ ಬೇರೆ...

ಹೀಗೇ ಹರಿದ ಯೋಚನೆಗಳ ಮೆರವಣಿಗೆ...
ಒಂದು ಮುದ್ದಾದ ಹೂವು ಕಣ್ಣಿಗೆ ಬಿದ್ದಾಗ ಅದನ್ನ ಕಿತ್ತು ಕೈಯಲ್ಲಿ ಹಿಡಿಯೋ ಆಸೆಗೆ ಯಾಕೆ ಬೀಳ್ತೀವಿ? ಕಿತ್ತ ಕೆಲ ಘಳಿಗೆಯಲ್ಲಿ ಮುರುಟಿಹೋಗುತ್ತೆ ಅನ್ನೋದು ಆ ಕ್ಷಣದಲ್ಲಿ ಮರೆತುಬಿಡ್ತೀವಾ...ಅಲ್ಲೇ ನೋಡಿ ಖುಷಿ ಪಟ್ಟಿದ್ದ್ರೆ ಆ ಸಂತೋಷದ ಅನುಭವ ಸದಾ ನಮ್ಮ ಜೊತೆ ಇರುತ್ತೆ ಅನ್ನೋದು ಮನಸ್ಸಿಗೆ ಯಾಕೆ ಹೊಳೆಯಲ್ಲ...ಎಲ್ಲವನ್ನ ಹಿಡಿದು ಮುಷ್ಟಿಯಲ್ಲಿ ಮುಚ್ಚಿಟ್ಟುಕೊಳ್ಳೋ possessiveness ನಮ್ಮ ವಿಷಾದಗಳಿಗೆ ಕಾರಣ ಅನ್ನಿಸುತ್ತೆ! ಕೈಗೆ ಸಿಗಲಿಲ್ಲಾ ಅನ್ನೋ ಕಾರಣಕ್ಕೆ ಆ ಕ್ಷಣದ ಕಿರುನಗೆಯನ್ನೂ ಕಣ್ಣೀರಾಗಿಸಿಬಿಡೋದು ಹುಚ್ಚುತನ ಅಲ್ಲ್ವಾ!

ಒಂದು ಸುಂದರ ಕನಸು ಕಣ್ಣು ತುಂಬಿದಾಗ ಅದನ್ನ ನಿಜ ಮಾಡಿಸಿಕೊಳ್ಳೋ ಆಸೆಯಲ್ಲಿ ಅದು ಕನಸಾಗಿಯೂ ಉಳಿಯದೆ ಹೋಗಬಹುದನ್ನೋ ವಾಸ್ತವವನ್ನ ಸ್ವಪ್ನವಾಸವದತ್ತದ ಉದಯನನಂತೆ ಮರೆಯುತ್ತ ಹೋಗೋದು ಯಾಕೆ...

ಇಂದು ಅರಳಿದ ಹೂವುಗಳನ್ನ ನಾಳೆ ಕಳೆದುಕೊಳ್ಳೋ ಭಯ ಮರೆತು ಇವತ್ತಿನ ಖುಷಿ ಅನುಭವಿಸೋದು ಕಲ್ತಾಗ್ಲೇ,
ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ ...ಅಂದಾಗ್ಲೇ ಬೀಸುಗಾಳಿಗೆ ಬೀಳುತೇಳುತ ದೋಣಿ ಮುಂದೆ ಸಾಗೋದು ಅನ್ನೋದು ಅರ್ಥವಾದಾಗ ಮುಳುಗೋ ಭಯ ಹೋಗುತ್ತೇನೋ!:)

( ಮಿಸ್ ಲೀಲಾವತಿ ಚಿತ್ರದ ಕ್ಲಾಸಿಕ್ ಹಾಡು 'ದೋಣಿ ಸಾಗಲಿ' - ಸಾಹಿತ್ಯ ಇಲ್ಲಿದೆ)