Sunday, December 06, 2009

ಪ್ರೀತಿಯ ಸಿನೆಮಾ

ನನ್ನ ಮಿಕ್ಕೆಲ್ಲ ಸೋಮಾರಿ ಪ್ಲ್ಯಾನುಗಳಂತೆ 'ಸಿನೆಮಾ ಪ್ಯಾರಡಿಸೋ'
ನೋಡಬೇಕು ಅನ್ನೂದಕ್ಕೂ ವರ್ಷ ದಾಟಿದ ಮೇಲೆ ಕೊನೆಗೂ ಮುಹೂರ್ತ ಬಂತು! ನೋಡೋಕೆ ಅಂತ ಕೂತ್ಕೊಳ್ಳೋಕೆ ವರ್ಷವಾದ್ರೂ ಫ್ಯಾಶ್ಬ್ಯಾಕ್ ನಲ್ಲಿ ತೆರೆದುಕೋಳ್ಳೋ ಚಿತ್ರ ನಿರ್ದೇಶಕನೊಬ್ಬನ ಬದುಕು, ಪ್ರೀತಿಗಳ ಈ ಕಥೆಪ್ರೀತಿಯಲ್ಲಿ ಮುಳುಗಿಹೊಗೋಕೆ ಮಾತ್ರ ನಿಮಿಷಗಳೇ ಬೇಕಾಗ್ಲಿಲ್ಲ!



ಪ್ರೊಜೆಕ್ಷನ್ ಬೂತಿನ ಕಡೆ ನೆಟ್ಟ ಪುಟ್ಟ ಕಂಗಳು ನಿರ್ದೇಶಕನಾಗಿ ಹೆಸರು ಮಾಡಿ ಮತ್ತೆ ಊರಿಗೆ ಮರಳುವ ವರೆಗೆ ಕಾಣುವುದು, ಕಾಣಿಸುವುದು ಏನೇನೆಲ್ಲ!


ಪುಟ್ಟ ಊರಿನಲ್ಲಿ ಆ ಚಿತ್ರಮಂದಿರ ಒಟ್ಟುಮಾಡುವ ಆ ಚಿಕ್ಕ ಚಿಕ್ಕ ಖುಷಿಗಳಿಗೆ, ಸೆನ್ಸಾರ್ ಸೆಶನ್ನುಗಳಲ್ಲಿ ಪರದೆಯ ಮಧ್ಯೆ ತೂಗುದೀಪಗಳಾಗೋ ಆ ಪುಟ್ಟ ಕಂಗಳಿಗೆ, ಕತ್ತರಿ ಬಿದ್ದಾಗಲೆಲ್ಲ ಅರಳುವ ಆ ತುಂಟ ನಗುಗಳಿಗೆ, ಎದ್ದು ಬಿದ್ದು ಸಿನೆಮಾ ನೋಡುವ ಆ ಮುದ್ದು ಹುಚ್ಚಿಗೆ, ಆ ಔಟ್ ಡೋರ್ ಪ್ರದರ್ಶನಗಳ ಐದಿಯಾಗಳಿಗೆ(ನನ್ನ ಅಚ್ಚುಮೆಚ್ಚಿನ ದೃಶ್ಯ!), ನಿದ್ರೆಗೆಟ್ಟು ಕಿಟಕಿಯಾಚೆ ಕಾಯುವ ಆ ಮುಗ್ಧ ಪ್ರೀತಿಗೆ... ಸ್ನೇಹದ ಆ ಕೊನೆಯ ಉಡುಗೊರೆಗೆ...

ಕುತೂಹಲ ಆಸಕ್ತಿಯಾಗಿ, ಆಸಕ್ತಿ ಪ್ರಯೋಗಕ್ಕಿಳಿದು, ಅದು ಸಫಲವಾಗಿ ಮನ್ನಣೆ ಪಡೆಯುವಲ್ಲಿ ದಾಟಿಹೋದ ಬದುಕು, ಪುಟ್ಟ ಊರಿನಲ್ಲಿ ಚಲನಚಿತ್ರದಂಥ ಮಾಧ್ಯಮ ಬೆಸೆಯುವ ಬಂಧಗಳು, ಅದರ ಅವಶ್ಯಕತೆ, ಹಳೆಯ ಚಿತ್ರ ಪ್ರದರ್ಶನ ತಂತ್ರಗಳು, ಅವುಗಳ ಓಲ್ಡ್ ವರ್ಲ್ಡ್ ಚಾರ್ಮ್...
ಹಿಂದೆ ಬರಲಾಗದ ದಾರಿಗಳು, ಮುಂದೆ ಹೋಗಿಯೂ ಹಿಂದೆ ನಿಂತ ಮನಸುಗಳು...
ಇತಿಹಾಸ, ಕಲೆ, ಬದುಕು, growing up, ಪ್ರಗತಿ, ಪ್ರೀತಿ - ಪ್ರೇರಣೆ - ಸಾಧನೆಗಳ ವಿಚಿತ್ರ ಬಂಧಗಳು...

ಇವೆಲ್ಲಕ್ಕೂ, ನೋಡಬೇಕಾದ ಚಿತ್ರ ಸಿನೆಮಾ ಪ್ಯಾರಡೀಸೋ.

ಅವಾರ್ಡುಗಳ ಸರಮಾಲೆ ಹೊತ್ತರೂ, ಸಬ್ ಟೈಟಲ್ ಇಲ್ಲದ ಸಿನೆಮಾ ಅಂದ್ರೆ ಕಾಮೆಡಿ ಷೋ ಆಗಿಬಿಡುವ ನನ್ನಂಥವಳ ಕಣ್ಣು ಸುಲಭವಾಗಿ ತಪ್ಪಿಸಿದ್ದ Giuseppe Tornatore ಈ ಇಟಾಲಿಯನ್ ಸಿನೆಮಾವನ್ನು ನೀ ನೋಡಲೇಬೇಕು ಅಂದ ಗೆಳೆಯನಿಗೆ,
ಥ್ಯಾಂಕ್ಯೂ...Toto!

Wednesday, September 16, 2009

ಮಳೆಯ ಕನಸು

ನಿಂತು ಬೇಸತ್ತು
ಹಳೆಯ ಹೊಳವುಗಳಲ್ಲಿ
ಹರಿಯಬಿಡಬೇಡ;
ಇಳಿ ವರ್ಷಧಾರೆಯಾಗಿ,
ನಿನ್ನ ನಿರೀಕ್ಷೆ
ಹೊಸಹಸಿರಿಗೆ
ಉಸಿರಾಗುವ ಕನಸಿನಲ್ಲಿ...

ಕೀಲಿಮಣೆಯ ಮೇಲೆ ಸವಾರಿ...
ಸುರಿದ ಮುಸಲಧಾರೆಗೆ
ಫಟ್ಟೆಂದ ಟ್ರ್ಯಾನ್ಸ್‌ಫಾರ್ಮರ್!
ಕತ್ತಲ ಮಳೆಯಲ್ಲಿ
ಕವಿತೆ ಮಲಗಿತು
ಕನಸು ಬಿತ್ತಾ?
ಗೊತ್ತಿಲ್ಲ!

Monday, August 24, 2009



ಕನಸು? ಆಕಾಂಕ್ಷೆ?
ಹೊಸ ಬೆಳಗು,
ಗೆಲುವಿಗೆ
ನಕ್ಷತ್ರಲೋಕಕ್ಕೆ ಏಣಿ...

ಸುರಿದ ಮಳೆಗಳು?
ಗಾಳಿ - ಬಿಸಿಲು?
ಹೊಸ ಅಲೆಯ ದಾಪುಗಾಲು?
ನಡುಗಿದ ಒಡಲು
ಸೀಳಿ ಬೆಳೆದ ಹುಲ್ಲು...
ಜೀವ ಕುಸಿದು
ಕಳೆದುಳಿದದ್ದು
ನಾಳೆಗೆ ನಿನ್ನೆಯ ನೆನಪು;
ಕಳೆದ ಸಾವಿರ ಕನಸುಗಳ
ಭದ್ರ ಬುನಾದಿ.

ಕಣ್ಣೆತ್ತಿ
ಕತ್ತಲವರೆಗೆ
ಕಾದರೆ ಮತ್ತೆ ನಕ್ಷತ್ರಲೋಕ
ಝಗಮಗ.
ಮರುಬೆಳಗಿಗೆ
ತೊಳೆದು ಕವಚಿದ ಆಕಾಶ

Sunday, July 05, 2009

ಕಳೆದ ಬೇಸಿಗೆ

ಕಳೆಯದ ಹಳೆ ಹಾಡುಗಳು
ಒಂದಷ್ಟು ಹಳೆ ಮುಖಗಳು
ಬೇಕಾದ್ದು - ಬೇಡದ್ದು
ಕಸ-ಕಡ್ಡಿ ಉರುವಲು
ಸಣ್ಣಗೆ ಬೆಂಕಿ
ತಣ್ಣಗೆ ಕಳೆದ
ನೀನಿರದ ಬೇಸಿಗೆಯ ಸಂಜೆಗಳು